ಮನದಾಳದ ಮಾತನ್ನು ಹೇಳಲೇ?
ಇನಿಯಾ, ನೀನಿಲ್ಲದೆ ಮನೆಯೆಲ್ಲ ಖಾಲಿ
ಮನವೆಲ್ಲ ನಿನ್ನದೇ ಖಯಾಲಿ. ||
ಮುಂಜಾವಿನ ಹೊನ್ನಿನ ಕಿರಣ
ಬೀಳೆ ನೆನಪಾಗುವುದು ನಿನ್ನ ಚುಂಬನ|
ಹಕ್ಕಿಗಳ ಚಿಲಿಪಿಲಿ ಕಲರವ
ಕಿವಿ ಕಾತರಿಸುವುದು ನಿನ್ನ ಪಿಸುಮಾತಿನ ರವ ||
ಹೂವು ಬೀರಿದ ಕಂಪು
ಮರೆಯಗೊಡದು ನಿನ್ನ ನೆನಪು|
ಹೊರಗೆ ತಂಪು ಗಾಳಿ ಬೀಸುತಿರೆ
ನಿನ್ನ ಒಲವ ಧಾರೆ ಕಾಡುತಿರೆ||
ಆಗಸದಿ ಚೆಲ್ಲಿಹುದು ತಾರೆಗಳ ಕಾಂತಿ
ಕಂಡಿದ್ದೆ ನಿನ್ನ ನಯನ ತುಂಬ ಪ್ರೀತಿ|
ಮುಗ್ಧ ಕಂದನ ಮುದ್ದು ಕೇಕೆ
ನೆನಪಿಸುವುದು ನಿನ್ನ ನಗುವ ರೇಖೆ
ನಿನ್ನ ನೆನಪು ಮತ್ತೆ ಮತ್ತೆ ಕಾಡುತಿದೆ ,ಹೀಗೇಕೆ?||